ರೆಂಬ್ರಾಂಟ್
1606-69.  ನೆದರ್‍ಲೆಂಡ್‍ನ ಪ್ರಸಿದ್ಧ ಕಲಾವಿದ.  ಇವನು ನೆದರ್‍ಲೆಂಡಿನ ಲೈಡನ್‍ನಲ್ಲಿ 1606 ಜುಲೈ 15ರಂದು ಜನಿಸಿದ.  ಇವನ ಪೂರ್ಣ ಹೆಸರು ರೆಂಬ್ರಾಂಟ್ ಹರ್ಮೆನ್ಸೂನ್ ವ್ಯಾನ್ ರಿನ್.  ಇವನು ಲೈಡನಿನಲ್ಲಿ ಒಬ್ಬ ಸಾಮಾನ್ಯ ಕಲೆಗಾರನ ಸಹಾಯದಿಂದ ಕಲಾ ತರಬೇತಿ ಪಡೆದ (1621-24).  ಅನಂತರ ಆ್ಯಮ್‍ಸ್ಟರ್‍ಡ್ಯಾಮ್‍ನಲ್ಲಿ ಪೀಟರ್ ಲಾಸ್ಟ್‍ಮನ್ ಎಂಬ ಡಚ್ ಕಲೆಗಾರನಲ್ಲಿ ಉನ್ನತ ತರಬೇತಿ ಪಡೆದ.  ಅನಂತರ ಅಲ್ಲಿಂದ ತಾಯ್ನಾಡಿಗೆ ಮರಳಿ (1625) ತನ್ನದೇ ಚಿತ್ರಗಾರಿಕೆಯಲ್ಲಿ ತೊಡಗಿಕೊಂಡ.  ಇವನ ದಾಂಪತ್ಯ ಜೀವನ ಅಷ್ಟೇನೂ ಆನಂದದಾಯಕವಾಗಿರಲಿಲ್ಲ.

ಅನಾಟಮಿ ಲೆಸನ್ ಆಫ್ ಪ್ರೊಫೆಸರ್ ಟಲ್ಫ್ ಎಂಬ ಚಿತ್ರ ರಚಿಸಿದ (1632). ಈ ಚಿತ್ರದ ವಿಶೇಷವೇನೆಂದರೆ ಇದು ನಾನಾ ಗುಂಪಿನ ಜನರನ್ನೊಳಗೊಂಡಿದ್ದರೂ ಪ್ರತಿಯೊಬ್ಬರ ಕ್ರಿಯೆ-ಪ್ರತಿಕ್ರಿಯೆ ಹಾಗೂ ಭಾವನೆಗಳು ಪ್ರತ್ಯೇಕಚಲನಶೀಲತೆಯನ್ನು ತೋರಿಸುವಂತಿವೆ. ಈ ಚಿತ್ರದಿಂದ ಆ್ಯಮ್‍ಸ್ಟರ್‍ಡ್ಯಾಮ್‍ನಲ್ಲಿ ಈತ ತಾರಾಮೌಲ್ಯ ಪಡೆದದ್ದಲ್ಲದೆ, ಇದು ಅತ್ಯಂತ ಹೊಸತನದ್ದೆಂಬ ಹೆಗ್ಗಳಿಕೆಗೂ ಪಾತ್ರವಾಯಿತು.  ದ ನೈಟ್ ವಾಚ್ ಎಂಬ ಮಹಾಕೃತಿ (1642) ಹೆಚ್ಚಿನ ಬೆಲೆಗೆ ಮಾರಾಟ ವಾಗಿ ದಾಖಲೆ ನಿರ್ಮಿಸಿತು.  ಬ್ಲೈಡಿಂಗ್ ಆಫ್ ಸ್ಯಾಮ್ಸನ್, ಡ್ಯಾನೇ ಹಾಗೂ ರೇಪ್ ಆಫ್ ಗ್ಯಾನಿಮೀಡ್ ಕೃತಿಗಳು ಅತ್ಯಂತ ಭಾವನಾತ್ಮಕ ಸತ್ತ್ವವುಳ್ಳ ಮಹಾಕೃತಿಗಳೆಂದು ಖ್ಯಾತವಾಗಿವೆ.  ಕೆಲವು ವಿದ್ವಾಂಸರು ಇವನು 600 ವರ್ಣಚಿತ್ರಗಳನ್ನೂ 300 ಕೆತ್ತನೆ ಕೃತಿಗಳನ್ನೂ 1,400 ರೇಖಾಚಿತ್ರಗಳನ್ನೂ ರಚಿಸಿದ್ದಾನೆಂದು ಗುರುತಿಸಿದ್ದಾರೆ. ಇವುಗಳಲ್ಲಿ ಕೆಲವು ಕಾಣೆಯಾಗಿವೆಯೆಂದೂ ಕೆಲವನ್ನು ಇವನ ಶಿಷ್ಯರು ರಚಿಸಿದ್ದಾರೆಂದೂ ಹೇಳಲಾಗುತ್ತದೆ.

ಇವನ ಕಲಾಕೃತಿಯ ವಸ್ತು ವೈವಿಧ್ಯಪೂರ್ಣವಾದ್ದು.  ಬೈಬಲ್, ಇತಿಹಾಸ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳವು. ಇವಲ್ಲದೆ ಇವನು ಅನೇಕ ವ್ಯಕ್ತಿ ಚಿತ್ರಗಳನ್ನೂ ಪ್ರಾದೇಶಿಕ ಚಿತ್ರಗಳನ್ನೂ ನಗ್ನಚಿತ್ರಗಳನ್ನೂ ದಿನನಿತ್ಯದ ಪ್ರಕೃತಿ ಚಿತ್ರಗಳನ್ನೂ ರಚಿಸಿದ್ದಾನೆ. ಇವನ ಕಲಾ ಜೀವನದುದ್ದಕ್ಕೂ ತನ್ನದೇ ಸು. 100 ಪ್ರಸಿದ್ಧ ಚಿತ್ರಗಳನ್ನು ಬೇರೆ ಬೇರೆ ಸಂದರ್ಭಕ್ಕನುಗುಣವಾಗಿ ರಚಿಸಿಕೊಂಡಿದ್ದಾನೆ.

ಇವನ ಕೃತಿಗಳಲ್ಲಿರುವ ಕಥನಾತ್ಮಕಗುಣ, ಮನುಷ್ಯನ ಅಂತರಂಗದ ಭಾವನೆಗಳನ್ನು ರೇಖೆಗಳಲ್ಲಿ ಹಿಡಿದಿಡುವ ಸಾಮಥ್ರ್ಯ ಹಾಗೂ ನೆರಳು ಬೆಳಕಿನ ಹೊಂದಾಣಿಕೆ, ಹದವಾದ ವರ್ಣವೈವಿಧ್ಯ ಇವನ ಕಲಾ ಶೈಲಿಯ ವಿಶೇಷ  ಇವನ ಚಿತ್ರಗಳು ಜೀವಂತಿಕೆಯಿಂದ ಉಸಿರಾಡುವಂತೆ ಕಾಣಿಸುವಲ್ಲಿ ಸಫಲವಾಗಿವೆ.  ಅನೇಕ ಕಲೆಗಾರರು ಇವನು ರಚಿಸಿರುವ ಪಾತ್ರ ವೈವಿಧ್ಯಗಳಲ್ಲಿನ ಜೀವಂತಿಕೆಯನ್ನು ಬೈಬಲ್ಲಿನ ಪಾತ್ರಗಳ ಗುಣಕ್ಕೆ ಹೋಲಿಸಿದ್ದಾರೆ.  ಇವನ ಚಿತ್ರಗಳ ಮುಖಭಾವ ಚಲನಶೀಲ ಹಾಗೂ ಅಭಿನಯಪೂರ್ವಕವಾಗಿ ಸಂಭಾಷಿಸುತ್ತಿರುವಂತಿರುವುದೇ ಇವನ ಕಲೆಯ ಹೆಗ್ಗಳಿಕೆ. 1629 ಹಾಗೂ 1658 ರಲ್ಲಿ ರಚಿಸಿದ ಇವನ ಎರಡು ಸ್ವಂತ ತೈಲಚಿತ್ರಗಳು ಅತ್ಯಂತ ಅಪೂರ್ವ ಸಂಗ್ರಹಗಳೆಂದು ನ್ಯೂಯಾರ್ಕ್ ಸಿಟಿಯ ದಫ್ರಿಕ್ ಕಲೆಕ್ಷನ್ ಅಭಿಪ್ರಾಯಪಟ್ಟಿದೆ. ಇವನ್ನು ನೆದರ್‍ಲೆಂಡ್ ಹೇಗ್‍ನ ಮ್ಯಾರಿಟನ್ ಮ್ಯೂಸಿಯಮ್‍ನಲ್ಲಿ ಪ್ರದರ್ಶಿಸಲಾಗಿದೆ.

ಇವನು ರಚಿಸಿರುವ ಬಹುತೇಕ ಚಿತ್ರಗಳು ಗಾತ್ರದಲ್ಲಿ ಸಣ್ಣವು.  ಇವು ಬೈಬಲ್ ಹಾಗೂ ಇತಿಹಾಸದಿಂದ ಆರಿಸಿಕೊಂಡ ವಸ್ತುವಿಷಯ ವುಳ್ಳವು.  ಲಾಸ್ಟ್‍ಮನ್‍ನ ಪ್ರಭಾವದಿಂದ ರಚಿಸಿದ ಕೆಲವು ಚಿತ್ರಗಳು ವಿಚಿತ್ರ ವರ್ಣವೈವಿಧ್ಯ ಹಾಗೂ ಗಾಜಿನಂಥ ಹಿನ್ನೆಲೆಯ ವರ್ಣಚಿತ್ರಗ ಳಾಗಿವೆ. ಇವನು 1669 ರಲ್ಲಿ ನಿಧನನಾದ.	
(ಜಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ